Thursday, October 16, 2014

ಮುರುಡೇಶ್ವರದ ಯಕ್ಷ ರಕ್ಷೆಯ ಹರಿಕಾರರಿಗೊಂದು ನಮನ

ಡಾ. ಐಯ್. ಆರ್ ಭಟ್ ರವರನ್ನು ನಾನು ಪ್ರಥಮವಾಗಿ ಭೇಟಿಯಾದದ್ದು ಜನವರಿ ೨೧ ೨೦೧೩ ರಂದು ಮುರುಡೇಶ್ವರ ಜಾತ್ರೆಯ ಯಕ್ಷ ರಕ್ಷೆಯ ಚಿತ್ರಾಕ್ಷಿ ಕಲ್ಯಾಣವೆಂಬ ಯಕ್ಷಗಾನ ಕಾರ್ಯಕ್ರಮಕ್ಕೆ ಅತಿಥಿ ಕಲಾವಿದನಾಗಿ ಬಂದಾಗ . ಈ ಸೌಭಾಗ್ಯವನ್ನು ನನಗೆ ನೀಡಿದವರು ಯಕ್ಷ ರಕ್ಷೆಯ ಕಾರ್ಯದರ್ಶಿಯಗಿರುವ ಗಣಪತಿ ಕಾಯ್ಕಿಣಿಯವರು.ಯಕ್ಷರಕ್ಷೆಯ ಮನೆಯೊಳಗೆ ಬಂದಾಗ ಇಲ್ಲಿಯ ಸುಂದರ ವ್ಯವಸ್ಥೆ ,ರಂಗಸ್ತಳ, ಚೌಕಿ ಮನೆ ,ಸಾಹಿತ್ಯ ಪುಸ್ತಕಗಳ ಭಂಡಾರ ,ಚೌಕಿ ಮನೆಯ ಮಾಡಿಗೆ ನೇತು ಹಾಕಿದ ಕಲಾವಿದರ ಚಿತ್ರಪಟ ,ಶ್ರುತಿ ಪೆಟ್ಟಿಗೆ,ಮದ್ದಳೆ ,ಚಂಡೆ,ತಾಳ ,ಒಡ್ಡೋಲಗದ ನೀಲಿ ಬಣ್ಣದ ಪರದೆಗಳನ್ನೆಲ್ಲ ಕಂಡಾಗ ಈ ಪರಿಯಲ್ಲಿ ಕಟ್ಟಿ ಬೆಳೆಸಿದ ಪುಟ್ಟ ಯಕ್ಷಕಾಶಿಯ ಯಶಸ್ವಿ ಹರಿಕಾರ ಡಾ. ಐಯ್. ಆರ್ ಭಟ್ ರವರು ಎಂದಾಗ ಯಕ್ಷ ಮಾತೆಯ ಆರಾಧಕನದ ನನಗೆ ಹೃದಯ ತುಂಬಿ ಬಂತು, ಅವರ ಸಾದನೆಗೆ ಮನದಲ್ಲೇ ನೆನೆದೆ. ಅಲ್ಲಿಂದ ಇಲ್ಲಿಯವರೆಗೆ ಅವರು ಆಯೋಜಿಸಿದ ಅದೆಷ್ಟೋ ಕಾರ್ಯಕ್ರಮಗಳಲ್ಲಿ ನಾನು ಕಂಡದ್ದು ಅವರ ಉತ್ಸಾಹದ ಚಿಲುಮೆ , ಸ್ಪೂರ್ತಿ , ಧನಾತ್ಮಕ ಚಿಂತನೆ ,ಕಲಾವಿದರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಕಲಾ ಪೋಷಕ ಗುಣ.

ಅವರು ಅದೆಷ್ಟು ಯಕ್ಷಗಾನವನ್ನು ಪ್ರೀತಿಸುತ್ತಿದ್ದರೆಂದರೆ ಅವರ ಚರದೂರವಾಣಿಯ ರಿಂಗಣ ಯಕ್ಷಗಾನ ಪದವಾಗಿತ್ತು , ಭಟ್ಟರು ಬೆಳಗ್ಗೆ ಎದ್ದು ಮೊದಲು ಬರುವುದು ಯಕ್ಷ ರಕ್ಷೆಗೆ. ಅಲ್ಲಿ ಹಾಡುತ್ತಿದ್ದ ಮದುರ ಕೋಗಿಲೆ ದಿ. ಕೊಪ್ಪದಮಕ್ಕಿ ಈರಪ್ಪ ಭಾಗವತರು ತಾಳ ಹಿಡಿದು ಹಾಡಿದರೆ ಸಾಕು ನಮ್ಮ ಭಟ್ಟರು ಮದ್ದಳೆ ಹಿಡಿದು ಲಯಬದ್ದವಾಗಿ ಭಾರಿಸುತ್ತಿದ್ದರೆ ಯಕ್ಷ ಲೋಕವೇ ಸೃಷ್ಟಿಯಾಗುತ್ತಿತ್ತು. ರಾತ್ರಿಯ ಯಕ್ಷ ರಕ್ಷೆಯ ಆಟ ಮುಗಿಸಿ ಅಲ್ಲಿಯೇ ಮಲಗಿ ಬೆಳೆಗ್ಗೆ ಎದ್ದಾಗ ಕಂಡ ಈ ಪುಟ್ಟ ಲೋಕ ಮರೆಯಲಸದಳ . ಯಕ್ಷ ರಕ್ಷೆಯನ್ನು ತನ್ನ ಮನೆಯ ಪಕ್ಕದಲ್ಲೇ ಕಟ್ಟಿ ಬೆಳೆಸಿ , ರಕ್ಷಣಾ ಕವಚದಂತಿರುವ ನಮ್ಮ ಭಟ್ಟರು ವೈದ್ಯರಾಗಿಯು ತನ್ನ ಕೈ ಗುಣ ಆರೈಕೆಯಿಂದ ಜನ ಮನ ಗೆದ್ದವರು. ನಮ್ಮ ಕಾಯಿಲೆ ಗುಣವಾಗಲು ಮನೋ ಸ್ಥೈರ್ಯ ಮುಖ್ಯ ಎನ್ನುತ್ತಿದ್ದರು ,ವೈದ್ಯರಾಗಿಯೂ , ಯಕ್ಷ ರಕ್ಷಕರಾಗಿಯೂ ಅವರು ಮಾಡಿದ ಸಮಾಜ ಮುಖಿ ಕೆಲಸ ಶ್ಲಾಘನೀಯ . ಯಕ್ಷ ಸ್ವರ ತಾಳದೊಂದಿಗೆ ಭವ್ಯ ಬದುಕಿನ ಲಯ ಕಂಡುಕೊಂಡ ಯಕ್ಷ ರಕ್ಷೆಯ ಸಾರಥಿ ಭಟ್ಟರ ಹಳೆಬೇರ ಹೊಸ ಚಿಗುರ ಆವಿಷ್ಕಾರ , ಬೆಳೆವ ಯಕ್ಷ ಸಾಮ್ರಾಜ್ಯಕ್ಕೆ ಭದ್ರ ಬುನಾದಿಯಗಲಿ,ಹೊಳೆವ ಯಕ್ಷ ಭ್ಯಾಗಡೆಗೆ ಮತ್ತಷ್ಟು ಹೊಳಪು ಕೊಟ್ಟು ಧರಿಸಿದ ಕಲಾವಿದರ ವೇಷಕ್ಕೆ ಮೆರುಗು ಕೊಡಲಿ,ಯಕ್ಷ ರಕ್ಷೆಯ ಮನೆಗೆ ಬೆಳಕು ಕೊಟ್ಟ ಅಯ್ಯರೆಂಬ ದಿವ್ಯ ದೀವಿಗೆ ಸದಾ ಉರಿಯುತಿರಲಿ , ಬೆಳಗುತಿರಲಿ ನಿರಂತರ.

ಬೆಳಗು ನಿರಂತರ ಯಕ್ಷರಕ್ಷೆಯೆಂಬ ದೀಪ
ಆರದಂತೆ ಕಾಯುತಿಹುದು ಅಯ್ಯರೆಂಬ ರೂಪ
ಧೀಂಕಿಟಕೆ ಕುಣಿವರೆಲ್ಲ ಈಬೆಳಕ ಪ್ರತಾಪ
ಯಕ್ಷಗಾನ ರಕ್ಷಕನೀ ಸಾದನೆ ಬಲು ಅಪರೂಪ.

ಯಕ್ಷ ರಕ್ಷೆಯ ಹರಿಕಾರನಿಗೊಂದು ನುಡಿ ನಮನ ,ಇಂತಿ ನಿಮ್ಮ ಕಲಾವಿದ ,
ಮಂಜುನಾಥ್ ಬಿಲ್ಲವ ಗುಜ್ಜಾಡಿ.