Wednesday, December 23, 2009

ಬರಡು ಜಗದ ಬದುಕು

ಹೇಗಾಯಿತು ಮನುಜನ ಬದುಕು ಬರಡು
ನೀತಿ ನಿಯಮವೆಂಬ ನಯನಗಳು ಕುರುಡು
ತೆರೆಸಲಾಗದು ದೂರ ಸಾಗಿದೆ ಮನವು
ವಿಕೃತ ಮನಕೆ ತೋರುವುದೇ ಜಗವು.

ಕೈ ಮೀರಿ ಸಾಗುತಿದೆ ಆಧುನಿಕವು
ಎಲ್ಲೇ ಮೀರಿ ಏರುತಿದೆ ಬಿಸಿಕಾವು
ಹೀಗೆ ಮುಂದುವರಿದರೆ ಕಾರುಬಾರು
ಮುಂದೆ ಆಗುವುದು ಜಗದ ಸಾವು.

ಇನ್ನೂ ಕೇಳುತಿಲ್ಲ ಭೂತಾಯಿಯ ಅಳುವು
ಕೇಳದಿನ್ನು ಅಜ್ನಾನದಿಂದಿಹ ಕಿವಿ ಕಿವುಡು
ಕೂಗಲು ಆಗದೋ ಕುಂದಿದೆ ಸ್ವರವು
ಅರಿತು ಬದುಕಿರೋ ಬರಡು ಆಗದು ಜಗವು.



Monday, December 21, 2009

ಬಾಡಿ ಹೋದ ಬಳ್ಳಿ

ಸಂತೋಷವೆಂಬ ಸ್ನೇಹ ಬಳ್ಳಿ
ಬಾಡಿತಿಂದು ಬದುಕ ತಳ್ಳಿ
ಚಿಗುರಲಾರದೆ ಈ ಭುವಿಯಲ್ಲಿ
ಮರೆಯಾಯಿತು ಆ ಮಣ್ಣಲ್ಲಿ .

ಮಿಂಚಿ ಮರೆಯಾದೆ ಎಲ್ಲಿ
ನೆನಪು ಮನದಲ್ಲಿ ಚೆಲ್ಲಿ
ಹೇಗೆ ಮರೆಯಲಿ ನಿನ್ನ ಬಾಳಲ್ಲಿ
ಮತ್ತೆ ಬಾ ಸ್ನೇಹದ ಬೆಳಕ ಚೆಲ್ಲಿ .

ನಮ್ಮ ಸ್ನೇಹದ ಗೂಡಲ್ಲಿ
ಸಂತಸದ ಹಕ್ಕಿ ನೀನೆಲ್ಲಿ
ಹಾರಿ ಭಾನ ಮರೆಯಲ್ಲಿ
ಲೀನವಾದೆಯ ನಕ್ಷತ್ರದ ರಾಶಿಯಲ್ಲಿ.