Thursday, May 28, 2009

ಮಾತು ಕೇಳದ ಮನಸ್ಸು


ಮನಸ್ಸೇ ಹಾಗೆ ಆಸೆಗಳ ಆಶಾಕಿರಣಗಳ ಹಿಂದೆ ಓಡುವ ಬಿಸಿಲು ಕುದುರೆಯಂತೆ . ಆತ್ಮದ ತುಮುಲಥೆಯನ್ನು ಕೇಳದೆ ,ಅರಿಯದೆ , ವಿಚಾರಿಸದೆ ಬೇಕಾದದ್ದನ್ನು ಪಡೆದು ಜಯಿಸುತ್ತದೆ .ಅನೇಕ ದೂರಗಳನ್ನು ಕ್ರಮಿಸಿ ಬಂದ ಕವಲು ಹಾದಿಯನ್ನು ನೆನೆದು ಆದ ಅನಾಹುತಕ್ಕಾಗಿ ಮರುಗುತ್ತದೆ . ಆದದ್ದನ್ನೇ ನೆನೆದು ಕೊರಗಿ ತನ್ನನ್ನು ತಾನು ನಾಶ ಪಡಿಸಿಕೊಳ್ಳುವಂತೆ ಮನ ಮಾಡುತ್ತದೆ .ಕಡಿವಾಣವಿಲ್ಲದ ಮನಸ್ಸು ಮಾತು ಕೇಳುವುದೇ ?.ಆಗ ಮನಸ್ಸು ಮಾಡುವುದೇ ಆತ್ಮದ ಕೊಲೆ . ಮಾತು ಕೇಳದ ಮನಸ್ಸಿನ ಪರಮಾವಧಿ ಇದೆ ಅಲ್ಲವೇ ?.



ತಾಳ್ಮೆಯೆಂಬ ಕಡಿವಾಣದಿಂದ ಮಾತು ಕೇಳದ ಮನಸ್ಸನ್ನು ನಿಯಂತ್ರಿಸಬೇಕು.ಆತ್ಮವಿಶ್ವಾಸ ಮತ್ತು ತಾಳ್ಮೆ ಆತ್ಮವನ್ನು ಕೊಲ್ಲಲು ಬಿಡದು.ಒಂಟಿಯಾಗಿ ಬೆಳೆದ ಮನಸ್ಸು ಬಲು ಬೇಗನೆ ದುಡುಕಿ ಕೆಡುಕಿನ ಹಾಧಿ ಹಿಡಿಯುತ್ತದೆ . ಇಂಥಹ ಮನಸ್ಸು ಒತ್ತಡಗಳ , ಸೋಲಿನ ಹೊರೆಯನ್ನು ಸಹಿಸುವುದಿಲ್ಲ . ಸಹಿಸುವ ಮೊದಲೇ ತನ್ನ ನಾಶಕ್ಕಾಗಿ ಹೆಣಗುತ್ತಿರುತ್ತದೆ. ಆಗ ಆಗುವುದೇ ಆತ್ಮದ ಅಂತ್ಯ .

ಮನಸ್ಸು ನಾನಾ ಕಾರಣಗಳಿಂದ ಒಂಟಿತನ ಅನುಭವಿಸುತ್ತದೆ.ಈ ದಿನಗಳಲ್ಲಿ ಬಾಲ್ಯದಿಂದಲೇ ಅನೇಕ ಮಕ್ಕಳು ಒಂಟಿತನ ಅನುಭವಿಸಬೇಕಾಗುತ್ತದೆ. ಆಧುನಿಕತೆಯ ಜೀವನ ಶೈಲಿಯಿಂದ ಅನೇಕ ಕಂದಮ್ಮಗಳು ಪಾಲಕರ ಅಕ್ಕರೆಯ ಪೋಷಣೆಯಿಂದ ವಂಚಿತರಾಗುತ್ತಿದ್ದಾರೆ. ಬೆಳೆಯುವ ಸಿರಿಗೆ ಪ್ರೀತಿಯೆಂಬ ಹಾಲಿನ ,ಮಮತೆ ಎಂಬ ಜೆನೀನ ಆಸರೆಯ ಅಗತ್ಯವಿರುತ್ತದೆ.